ಪತ್ರಿಕಾ ಬರಹಗಳು

ಸ್ಕಿನ್ ಸೀಕ್ರೆಟ್

ಡಾ. ಬಾಲಸರಸ್ವತಿ, ಚರ್ಮ ರೋಗ ತಜ್ಞೆ, ಮಂಗಳೂರು

(ಕನ್ನಡಪ್ರಭ, ಜನವರಿ 18, 2016)

ಚರ್ಮವು ನಮ್ಮ ದೇಹಕ್ಕೆ ಸೌಂದರ್ಯವನ್ನು ನೀಡುವುದರ ಜೊತೆಗೆ ನಮ್ಮ ದೇಹಕ್ಕೆ ರಕ್ಷಣೆಯನ್ನೊದಗಿಸುತ್ತದೆ; ದೇಹದೊಳಗಿನ ಸ್ಥಿತಿಗತಿಗಳನ್ನೂ ಬಿಂಬಿಸುತ್ತದೆ.

ನಮ್ಮ ಕಣ್ಣಿಗೆ ಕಾಣಿಸುವ ಚರ್ಮದ ಹೊರ ಪದರವಾದ ಸ್ಟ್ರೇಟಮ್ ಕಾರ್ನಿಯಂ ಕಲ್ಲು-ಗಾರೆಗಳ ತಡೆಗೋಡೆಯಂತೆ ಕಾರ್ಯನಿರ್ವಹಿಸುತ್ತದೆ. ಅದರಲ್ಲಿರುವ ಪ್ರೊಟೀನುಯುಕ್ತ ಜೀವಕಣಗಳು ಕಲ್ಲುಗಳಿಂತಿದ್ದರೆ, ಅವುಗಳ ನಡುವೆ ಮೇದಸ್ಸಿನ ಸಂಯುಕ್ತಗಳು ಗಾರೆಯಂತೆ ತುಂಬಿರುತ್ತವೆ. ಈ ಪದರವು ನಿರಂತರವಾಗಿ ಪುನರುಜ್ಜೀವನಗೊಳ್ಳುತ್ತಾ, ಮೃದುವಾದ, ಮಣಿಯಬಲ್ಲ, ಆದರೆ ಬಹು ಸುಭದ್ರವಾದ ಕವಚವನ್ನು ನಮ್ಮ ದೇಹಕ್ಕೆ ಒದಗಿಸುತ್ತವೆ.

ಸೆರಮೈಡ್, ಕೊಲೆಸ್ಟರಾಲ್, ಮೇದೋ ಆಮ್ಲಗಳಂತಹ ಮೇದಸ್ಸಿನ ಸಂಯುಕ್ತಗಳು ಚರ್ಮದಿಂದ ತೇವಾಂಶವು ಹೊರಹೋಗದಂತೆ ರಕ್ಷಿಸಿ, ಚರ್ಮಕ್ಕೆ ಕಾಂತಿಯನ್ನು ನೀಡುತ್ತವೆ. ಪ್ರೊಟೀನುಯುಕ್ತ ಕಣಗಳಲ್ಲಿರುವ ಅಮೈನೋ ಆಮ್ಲಗಳು, ಯೂರಿಯಾ, ಸೋಡಿಯಂ ಲಾಕ್ಟೇಟ್ ಇತ್ಯಾದಿ ನೈಸರ್ಗಿಕ ತೇವಕಾರಕ ಸಂಯುಕ್ತಗಳು ತೇವಾಂಶವನ್ನು ಹಿಡಿದಿಡುತ್ತವೆ, ಚರ್ಮಕ್ಕೆ ಮಣಿಯಬಲ್ಲ ಸಾಮರ್ಥ್ಯವನ್ನು ನೀಡುತ್ತವೆ. ಸೋಪಿನ ಅತಿ ಬಳಕೆ, ವಯಸ್ಸಾಗುವಿಕೆ, ಪರಿಸರ, ಅನುವಂಶೀಯ ಸಮಸ್ಯೆಗಳು ಮುಂತಾದ ಕಾರಣಗಳಿಂದ ಈ ಸಂಯುಕ್ತಗಳಲ್ಲಿ ಯಾವುದೇ ಕೊರತೆಯಾದರೆ ಚರ್ಮವು ಹಾನಿಗೀಡಾಗಿ, ಕಾಂತಿಗೆಡುತ್ತದೆ, ಇತರ ಸಮಸ್ಯೆಗಳಿಗೂ ದಾರಿಯಾಗುತ್ತದೆ.

ಈ ಹೊರಪದರದ ಅಡಿಯಲ್ಲಿ ಚರ್ಮವನ್ನು ರಕ್ಷಿಸುವ ಜೀವಕಣಗಳ ಜಾಲವೇ ಇದೆ. ಹೊರಚರ್ಮವು ತಡೆಬೇಲಿಯಂತಿದ್ದರೆ, ಈ ಜೀವಕಣಗಳು ನಡುನಡುವೆ ನಿಂತಿರುವ ಸುರಕ್ಷತಾ ಕರ್ಮಿಗಳಂತೆ ಕಾರ್ಯ ನಿರ್ವಹಿಸುತ್ತವೆ. ಹೊರಚರ್ಮಕ್ಕೆ ಹಾನಿಯಾಗಿ ಬಿರುಕುಂಟಾದಾಗ ಹಾನಿಕಾರಕ ವಸ್ತುಗಳೂ, ಸೂಕ್ಷ್ಮಾಣುಗಳೂ ಚರ್ಮದೊಳಕ್ಕೆ ಪ್ರವೇಶಿಸುತ್ತವೆ ಹಾಗೂ ಚರ್ಮದಡಿಯಲ್ಲಿ ಹಲತರದ ರಾಸಾಯನಿಕ ಸಂಯುಕ್ತಗಳ ಬಿಡುಗಡೆಯನ್ನು ಪ್ರಚೋದಿಸುತ್ತವೆ. ಇವು ಚರ್ಮದ ಮೇಲೆ ವಿವಿಧ ತೊಂದರೆಗಳಾಗಿ ಕಾಣಿಸಿಕೊಳ್ಳುತ್ತವೆ.

ಚರ್ಮವು ಸದಾ ಹೊರಜಗತ್ತಿಗೆ ತೆರೆದುಕೊಂಡಿರುವುದರಿಂದ ಪ್ರತೀ ಕ್ಷಣವೂ ಹಲತರದ ಹಾನಿಕಾರಕ ವಸ್ತುಗಳನ್ನು ಎದುರಿಸುತ್ತಿರಬೇಕಾಗುತ್ತದೆ. ಹವೆಯ ಬದಲಾವಣೆಗಳು, ಸೂರ್ಯರಶ್ಮಿಯ ಬೆಳಕು ಹಾಗೂ ಅತಿನೇರಳೆ ಕಿರಣಗಳು, ಬಗೆಬಗೆಯ ಮಾಲಿನ್ಯ, ಗಾಳಿಯಲ್ಲಿರುವ ಸಸ್ಯಜನ್ಯ ಸಂಯುಕ್ತಗಳು ಇತ್ಯಾದಿಗಳು ಚರ್ಮದ ಮೇಲೆ ಎರಗುತ್ತಿರುತ್ತವೆ.

ಚಳಿ ಹಾಗೂ ಒಣ ಹವೆಯಲ್ಲಿ ಚರ್ಮವು ಒಣಗಿ, ತುರಿಕೆಯುಂಟಾಗಬಹುದು. ಬೇಸಿಗೆಯಲ್ಲಿ ಬಿಸಿಲಿನ ಝಳದಿಂದ ಚರ್ಮದ ಬಣ್ಣವು ಗಾಢವಾಗಬಹುದು, ಚರ್ಮದಲ್ಲಿ ದಡಿಕೆಗಳೇಳಬಹುದು, ಹಾಗೂ ಹೆಚ್ಚಿದ ತೇವಾಂಶದಿಂದ ಕೂದಲುಗಳಡಿ ಉರಿಯೂತವುಂಟಾಗಿ ಬೊಕ್ಕೆಗಳಾಗಬಹುದು. ಮಳೆಗಾಲದ ತೇವವು ಶಿಲೀಂಧ್ರಗಳ ಸೋಂಕು ಹೆಚ್ಚುವುದಕ್ಕೆ ಕಾರಣವಾಗಬಹುದು.

ಪರಿಸರ ಮಾಲಿನ್ಯದಿಂದ ಒಜೋನ್ ಪದರವು ಕ್ಷೀಣಿಸುತ್ತಿರುವುದರಿಂದ ಭೂಮಿಗೆ ತಲುಪುವ ಸೂರ್ಯರಶ್ಮಿಯ ಆತಿನೇರಳೆ ಕಿರಣಗಳು ಹೆಚ್ಚು ಪ್ರಖರಗೊಳ್ಳುತ್ತಿವೆ. ಇವುಗಳಿಂದ ಚರ್ಮದ ಹಾನಿಯು ಹೆಚ್ಚುತ್ತಿದೆ, ರೋಗರಕ್ಷಣಾ ವ್ಯವಸ್ಥೆಯ ಸಮಸ್ಯೆಗಳೂ ಹೆಚ್ಚುತ್ತಿವೆ.

ನಮ್ಮ ಚರ್ಮವು ಈ ಎಲ್ಲಾ ಆಘಾತಗಳನ್ನು ಎದುರಿಸಬೇಕಾದರೆ ಆ ತಡೆಗೋಡೆಯನ್ನು ಭದ್ರವಾಗಿರಿಸಬೇಕಾಗುತ್ತದೆ. ಅದಕ್ಕಾಗಿ ಚರ್ಮದ ಮೇದಸ್ಸನ್ನು ರಕ್ಷಿಸಿ, ನೈಸರ್ಗಿಕ ತೇವಕಾರಕಗಳನ್ನು ಉಳಿಸಿಕೊಳ್ಳಬೇಕಾಗುತ್ತದೆ. ಚರ್ಮದ ರಕ್ಷಣೆಯನ್ನು ಆದಷ್ಟು ಸಣ್ಣ ವಯಸ್ಸಿನಲ್ಲೇ ಆರಂಭಿಸಿ, ಪ್ರತಿನಿತ್ಯವೂ ಅನುಸರಿಸಬೇಕೇ ಹೊರತು, ಚರ್ಮಕ್ಕೆ ಹಾನಿಯಾದ ಬಳಿಕ ಆರಂಭಿಸುವುದಲ್ಲ.

ಸ್ನಾನದಿಂದಲೇ ಈ ರಕ್ಷಣೆಯು ಆರಂಭವಾಗಬೇಕು. ಸ್ನಾನಕ್ಕೆ ಬಳಸುವ ನೀರು ಬಹಳ ಬಿಸಿಯಾಗಿಯೂ, ಅತಿ ತಣ್ಣಗಾಗಿಯೂ ಇರಬಾರದು. ನೀರು ಅತಿ ಬಿಸಿಯಾಗಿದ್ದರೆ ಚರ್ಮದ ಮೇದಸ್ಸು ನಷ್ಟವಾಗುತ್ತದೆ, ತುಂಬಾ ತಣ್ಣಗಿನ ನೀರು ರಕ್ತನಾಳಗಳನ್ನು ಸಂಕುಚಿಸಿ ರಕ್ತ ಪೂರೈಕೆಗೆ ಅಡ್ಡಿಯುಂಟು ಮಾಡಿ ಚರ್ಮವನ್ನು ಒಣಗಿಸುತ್ತದೆ, ಸುಕ್ಕಾಗಿಸುತ್ತದೆ. ಸ್ಕ್ರಬ್ ಯಾ ಬ್ರಷ್‌ಗಳಿಂದ ತಿಕ್ಕುವುದರಿಂದಲೂ ಚರ್ಮವು ಹಾನಿಗೀಡಾಗುತ್ತದೆ.

ಸ್ನಾನಕ್ಕೆ ಯಾ ಮುಖ ತೊಳೆಯಲು ಬಳಸುವ ಸೋಪು ಅಥವಾ ಕ್ಲೆನ್ಸರ್‌ಗಳನ್ನು ಚರ್ಮದ ವಿಧಕ್ಕೆ ಅನುಗುಣವಾಗಿ ಆಯ್ದುಕೊಳ್ಳಬೇಕೇ ಹೊರತು ಮಾರುಕಟ್ಟೆಯ ಪ್ರಚಾರಕ್ಕೆ ಮರುಳಾಗಬಾರದು. ಒಣ ಚರ್ಮವುಳ್ಳವರು ಹೆಚ್ಚು ತೈಲಾಂಶವಿರುವ ಅಥವಾ ಗ್ಲಿಸರಿ‌ನ್‌ಯುಕ್ತ ಸೋಪುಗಳನ್ನು ಬಳಸಬೇಕು. ಬಗೆ ಬಗೆಯ ವಸ್ತುಗಳನ್ನು ಸೇರಿಸಿರುವ ಸೋಪುಗಳಿಂದ ಯಾವುದೇ ಲಾಭವಿಲ್ಲ. ಚರ್ಮದ ಮೇಲೆ ದಿನನಿತ್ಯ ಸೇರಿಕೊಳ್ಳುವ ಕೊಳೆ-ಕಶ್ಮಲಗಳನ್ನು ತೆಗೆಯುವುದಕ್ಕಷ್ಟೇ ಸೋಪುಗಳು ಬಳಕೆಯಾಗಬೇಕು; ಸೋಪುಗಳು ತ್ವಚೆಯನ್ನು ಬಿಳುಪಾಗಿಸಲಾರವು, ಯೌವನವನ್ನೂ ತರಲಾರವು.

ಸ್ನಾನದ ತಕ್ಷಣ ತೇವಕಾರಕಗಳನ್ನು (ಮೋಯಿಶ್ಚರೈಸರ್) ಲೇಪಿಸಿಕೊಳ್ಳುವುದು ಒಳ್ಳೆಯದು. ತೇವಕಾರಕಗಳ ಆಯ್ಕೆಯು ಕೂಡ ಚರ್ಮದ ವಿಧ ಹಾಗೂ ದೇಹದ ಭಾಗಗಳಿಗೆ ಅನುಗುಣವಾಗಿರಬೇಕು. ಅತಿಯಾದ ಒಣ ಚರ್ಮವುಳ್ಳವರು ತೈಲದಲ್ಲಿ ನೀರಿನಂಶವಿರುವ (ವಾಟರ್ ಇನ್ ಆಯಿಲ್, ಹೆಚ್ಚು ತೈಲಾಂಶವಿರುವ, ದಪ್ಪಗಿನ) ತೇವಕಾರಕಗಳನ್ನು ಬಳಸಬೇಕು. ಹಲಬಗೆಯ ಸಂಯುಕ್ತಗಳಿರುವ ತೇವಕಾರಕಗಳು ಹೆಚ್ಚು ಪರಿಣಾಮಕಾರಿ ಎಂದು ಹೇಳಲಾಗದು. ಕೈಗಳು ಹಾಗೂ ಪಾದಗಳಿಗೆ ನಿತ್ಯವೂ ಭೌತಿಕ, ಯಾಂತ್ರಿಕ, ರಾಸಾಯನಿಕ ಹಾನಿಗಳಾಗುವುದರಿಂದ ಪ್ರತಿ ದಿನದ ಕೊನೆಗೆ ಅವುಗಳಿಗೆ ತೇವಕಾರಕಗಳನ್ನು ಲೇಪಿಸುವುದು ಅಗತ್ಯ. ಒಣ ಹಾಗೂ ಸೂಕ್ಷ್ಮವಾದ ಚರ್ಮವುಳ್ಳವರು ಸೂರ್ಯರಶ್ಮಿಗೆ ತೆರೆದಿರುವ ಭಾಗಗಳಿಗೆ ಸನ್‌ಸ್ಕ್ರೀನ್‌ಗಳನ್ನು ಲೇಪಿಸಿದರೆ ಒಳ್ಳೆಯದು.

ಒಟ್ಟಿನಲ್ಲಿ ಚರ್ಮವನ್ನು ರಕ್ಷಿಸಿಕೊಂಡವರನ್ನು ಚರ್ಮವು ರಕ್ಷಿಸುತ್ತದೆ.

kp18jan

ಫೇರ್ ನೆಸ್ ಕ್ರೀಂಗಳು ನಿಜಕ್ಕೂ ಚರ್ಮವನ್ನು ಬಿಳುಪಾಗಿಸುತ್ತವಾ?

ಡಾ. ಬಾಲಸರಸ್ವತಿ, ಚರ್ಮ ರೋಗ ತಜ್ಞೆ, ಮಂಗಳೂರು

(ಕನ್ನಡಪ್ರಭ, ಅಕ್ಟೋಬರ್ 5, 2015)

ಮುಖವನ್ನು ಬಿಳುಪಾಗಿಸುವ ವಹಿವಾಟು ಆರಂಭಗೊಂಡದ್ದು ನಮ್ಮ ಭಾರತದಲ್ಲೇ, 1975ರಲ್ಲಿ. ಈಗದು ವರ್ಷಕ್ಕೆ ಸುಮಾರು ಮೂರು ಸಾವಿರ ಕೋಟಿಗೆ ತಲುಪಿದೆ. ಮಹಿಳೆಯರಿಗಷ್ಟೇ ಅಲ್ಲ, ಪುರುಷರಿಗಾಗಿಯೂ ಬಿಳುಪಾಗಿಸುವ ಕ್ರೀಂಗಳು ಲಭ್ಯವಾಗಿವೆ. ಬಿಳುಪಾಗಿರುವುದೇ ಸೌಂದರ್ಯವೆಂಬ ತೀರಾ ತಪ್ಪಾದ ಕಲ್ಪನೆಯಿಂದಲೇ ಇಂದು ಹಲವರು ಬಿಳುಪಾಗಿಸುವ ಕ್ರೀಂ, ಸೋಪು ಯಾ ಲೋಶನ್ ಗಳ ಮೊರೆ ಹೋಗುತ್ತಿದ್ದಾರೆ. ಬಿಳುಪಾಗಿರುವ ಚರ್ಮಕ್ಕಿಂತಲೂ ಕಾಯಿಲೆಯಿಲ್ಲದ ಚರ್ಮವನ್ನು ಹೊಂದುವುದೇ ಆದ್ಯತೆಯಾಗಿರಬೇಕು.

ಚರ್ಮದ ಮೆಲನೋಕಣಗಳಲ್ಲಿ ಉತ್ಪಾದನೆಯಾಗುವ ಮೆಲನಿನ್ ಎಂಬ ಸಂಯುಕ್ತವು ನಮ್ಮ ಚರ್ಮದ ಬಣ್ಣವನ್ನು ನಿರ್ಧರಿಸುತ್ತದೆ. ಈ ಮೆಲನಿನ್ ಸೂರ್ಯರಶ್ಮಿಯ ಅತಿನೇರಳೆ ಕಿರಣಗಳನ್ನು ಸೋಸಿ ತಡೆಯುತ್ತದೆ, ಚರ್ಮಕ್ಕೆ ಹಾನಿಯಾಗದಂತೆ ರಕ್ಷಿಸುತ್ತದೆ. ಆದ್ದರಿಂದ ಚರ್ಮದ ಪಾಲಿಗೆ ಮೆಲನಿನ್ ಅತ್ಯಗತ್ಯವಾಗಿದೆ.

ನಮ್ಮೆಲ್ಲರ ಚರ್ಮದ ಬಣ್ಣವು ಅದರಲ್ಲಿರುವ ಮೆಲನಿನ್ ಪ್ರಮಾಣಕ್ಕೆ ಅನುಗುಣವಾಗಿದ್ದು, ಅನುವಂಶೀಯವಾಗಿ ನಿರ್ಧರಿಸಲ್ಪಡುತ್ತದೆ. ಸೂರ್ಯರಶ್ಮಿಗೆ ತೆರೆದುಕೊಂಡಿರುವ ಚರ್ಮದ ಬಣ್ಣವು ಒಂದಿಷ್ಟು ಬದಲಾಗಬಹುದು; ಅದನ್ನು ತಡೆದರೆ ಯಾ ನಿವಾರಿಸಿದರೆ ಉಡುಪಿನೊಳಗಿನ ಚರ್ಮದ ಬಣ್ಣಕ್ಕೆ ಮರಳಿಸಬಹುದು, ಅದಕ್ಕಿಂತ ಹೆಚ್ಚು ಬದಲಿಸಲು ಸಾಧ್ಯವಾಗದು.

ಬಿಳುಪಾಗಿಸುವ ಕ್ರೀಂಗಳಲ್ಲಿ ಮೆಲನಿನ್ ಉತ್ಪಾದನೆಯ ವಿವಿಧ ಹಂತಗಳನ್ನು ತಡೆಯಬಲ್ಲ ರಾಸಾಯನಿಕ ಸಂಯುಕ್ತಗಳನ್ನು ಬಳಸಲಾಗುತ್ತದೆ. ಇವುಗಳಲ್ಲಿ ಕೆಲವು ಪರೀಕ್ಷೆಗಳಲ್ಲಿ ದೃಢಪಟ್ಟ ಸಂಯುಕ್ತಗಳು. ಆದರೆ, ಹೆಚ್ಚಿನವು ಗಿಡಮೂಲಿಕೆಗಳಿಂದಲೋ, ಇನ್ನಿತರ ಸಸ್ಯಗಳಿಂದಲೋ ಪಡೆದವುಗಳು. ಇಂತಹಾ ಸಸ್ಯಮೂಲದ ಉತ್ಪನ್ನಗಳು ಪರಿಣಾಮಕಾರಿಯೆನ್ನುವುದಕ್ಕೆ ಸಾಕಷ್ಟು ಆಧಾರಗಳಿಲ್ಲ. ಅವುಗಳಿಗೆ ಯಾವುದೇ ಅಡ್ಡ ಪರಿಣಾಮಗಳಿಲ್ಲವೆಂದು ಹೇಳಲಾಗುತ್ತಿದ್ದರೂ, ಅವುಗಳಲ್ಲಿರುವ ಪ್ರೋ ಸಯನಿಡೀನ್, ಪ್ರೋಆಂಥೋಸಯನಿಡೀನ್, ಪಾಲಿಫಿನಾಲ್, ಫಿನಾಲಿಕ್ ಮತ್ತು ಸಿನಮಿಕ್ ಆಮ್ಲ ಮುಂತಾದ ಸಂಯುಕ್ತಗಳು ಚರ್ಮವನ್ನು ಸೂಕ್ಷ್ಮಗೊಳಿಸಬಹುದು, ಚರ್ಮದಲ್ಲೂ, ದೇಹದೊಳಗೂ ಅಸಹಿಷ್ಣುತೆಯನ್ನುಂಟು ಮಾಡಿ ಚರ್ಮದ ತೀವ್ರ ಉರಿಯೂತಕ್ಕೆ ಕಾರಣವಾಗಬಹುದು.

ಬಿಳುಪಾಗಿಸುವ ಉತ್ಪನ್ನಗಳಲ್ಲಿ ಸಾಮಾನ್ಯವಾಗಿ ಬಳಸುವ ರಾಸಾಯನಿಕಗಳಲ್ಲಿ ಹೈಡ್ರೋಕ್ವಿನೋನ್, ಕೋಜಿಕ್ ಆಮ್ಲ, ಅಜೀಲಿಕ್ ಆಮ್ಲ, ಗ್ಲೈಕಾಲಿಕ್ ಆಮ್ಲ, ಲಾಕ್ಟಿಕ್ ಆಮ್ಲ, ರಿಸಾರ್ಸಿನಾಲ್ ಸೇರಿವೆ. ಆರ್ಬುಟಿನ್, ಲಿಕೋರಿಸ್ ಸಾರ, ಕುರ್ಕುಮಿನ್, ಫ್ಲಾವನಾಯ್ಡ್ ಗಳು ಸಸ್ಯಮೂಲದ ಬಿಳುಪುಕಾರಕಗಳಿಗೆ ಉದಾಹರಣೆಗಳು. ಕೆಲವು ಕ್ರೀಂಗಳಲ್ಲಿ ಸ್ಟೀರಾಯ್ಡ್ ಗಳನ್ನು ಮಿಶ್ರ ಮಾಡಲಾಗುತ್ತದೆ, ಅಂಥವುಗಳು ಅತಿ ಬೇಗನೇ, ತಾತ್ಕಾಲಿಕವಾಗಿ, ಚರ್ಮವನ್ನು ಬಿಳುಪಾಗಿಸುತ್ತವೆ.

ಬಿಳುಪಾಗಿಸುವ ಕೆಲವು ಉತ್ಪನ್ನಗಳನ್ನು ದೀರ್ಘಕಾಲ ಬಳಸಿದರೆ ಚರ್ಮಕ್ಕೆ ಹಾನಿಯಾಗಬಹುದು. ಈ ಕ್ರೀಂಗಳಲ್ಲಿ ಸೇರಿಸಲಾಗುವ ಸುಗಂಧದ್ರವ್ಯಗಳು ಚರ್ಮವನ್ನು ಇನ್ನಷ್ಟು ಕಪ್ಪಾಗಿಸಬಹುದು. ಕೆಲವು ಸಸ್ಯೋತ್ಪನ್ನಗಳು ಅಸಹಿಷ್ಣುತೆಯನ್ನೂ, ಉರಿಯೂತವನ್ನೂ ಉಂಟು ಮಾಡಿ ಚರ್ಮವನ್ನು ಹಾನಿಗೊಳಿಸಬಹುದು. ಸ್ಟೀರಾಯ್ಡ್ ಗಳಿಂದ ಮೊಡವೆಗಳು, ಕೆಂಪಾಗುವಿಕೆ, ಮುಖದಲ್ಲಿ ಕೂದಲಿನ ಬೆಳವಣಿಗೆ, ಚರ್ಮ ತೆಳುವಾಗುವುದು ಮುಂತಾದ ಸಮಸ್ಯೆಗಳಾಗಬಹುದು. ಇದೇ ಕಾರಣಕ್ಕೆ ಬಿಳುಪಾಗಿಸುವ ಕೆಲವು ಉತ್ಪನ್ನಗಳೀಗ ತನಿಖೆಗೊಳಗಾಗುತ್ತಿವೆ. ಹೈಡ್ರೋಕ್ವಿನೋನ್ ಚರ್ಮದೊಳಕ್ಕೆ ಸೇರಿಕೊಂಡರೆ ಕಪ್ಪು ಕಲೆಗಳನ್ನುಂಟು (ಓಕ್ರನೋಸಿಸ್) ಮಾಡಬಹುದು. ಕೋಜಿಕ್ ಆಮ್ಲದ ಸುರಕ್ಷತೆಯ ಬಗೆಗೂ ಸಂದೇಹಗಳಿವೆ.

ಬಿಳುಪಾಗಿಸುವ ಉತ್ಪನ್ನವು ಶೀಘ್ರವಾಗಿ ಪರಿಣಾಮ ಬೀರತೊಡಗಿದರೆ ಅದರಲ್ಲಿ ಸ್ಟೀರಾಯ್ಡ್ ಇರುವ ಸಾಧ್ಯತೆಗಳು ಹೆಚ್ಚು. ಮೊದಲಲ್ಲಿ ಚರ್ಮದ ಬಣ್ಣವು ತಿಳಿಯಾಗಿ, ನಂತರ ಬದಲಾಗತೊಡಗಿದರೆ ಹೈಡ್ರೋಕ್ವಿನೋನ್ ಪರಿಣಾಮವಿರಬಹುದು.

ಬಿಳುಪಾಗಿಸುವ ಉತ್ಪನ್ನಗಳನ್ನು ಬಳಸತೊಡಗಿದ ಬಳಿಕ ಮುಖದ ಬಣ್ಣವು ಕಪ್ಪಾಗತೊಡಗಿದರೆ ಅಥವಾ ಕುತ್ತಿಗೆಯ ಬಣ್ಣಕ್ಕಿಂತಲೂ ಗಾಢವಾಗತೊಡಗಿದರೆ ಅಂತಹ ಉತ್ಪನ್ನದ ಬಳಕೆಯನ್ನು ಕೂಡಲೇ ನಿಲ್ಲಿಸಬೇಕು.

ಚರ್ಮದ ಬಣ್ಣವನ್ನು ರಕ್ಷಿಸಿಕೊಳ್ಳಲು ಅತ್ಯುತ್ತಮವಾದ ವಿಧಾನವೆಂದರೆ ಹಗಲಿನ ವೇಳೆ ಸೂರ್ಯರಶ್ಮಿಯನ್ನು ತಡೆಯುವುದಕ್ಕೆ  ಸೂಕ್ತವಾದ ಸನ್ ಸ್ಕ್ರೀನ್ ಅನ್ನೂ, ರಾತ್ರಿಯ ವೇಳೆ ಚರ್ಮದ ತೇವಾಂಶವನ್ನು ಉಳಿಸುವುದಕ್ಕೆ ಒಳ್ಳೆಯ ಮೋಯಿಶ್ಚರೈಜರ್ ಅನ್ನೂ ಬಳಸುವುದು. ಸನ್ ಸ್ಕ್ರೀನ್ ಗಳು ಸೂರ್ಯರಶ್ಮಿಯಿಂದ ಮೆಲನಿನ್ ಪ್ರಚೋದನೆಯನ್ನು ತಡೆಯುತ್ತವೆ. ತೇವಾಂಶವನ್ನು ಉಳಿಸುವುದರಿಂದ ಹಗಲಲ್ಲಿ ಸೂರ್ಯರಶ್ಮಿಗಳ ಹೀರುವಿಕೆಯು ಕಡಿಮೆಯಾಗುತ್ತದೆ. ಹೀಗೆ ಚರ್ಮದ ಬಣ್ಣವನ್ನು ಉಳಿಸಿಕೊಳ್ಳಬಹುದು, ಚರ್ಮದ ಆರೋಗ್ಯವನ್ನೂ ಕಾಪಾಡಬಹುದು.

05_10_2015_007_036

ತೊನ್ನಿನ ಗಣಿ: ವಿಟಿಲಿಗೋಗೇನು ವೈದ್ಯೋಪಚಾರ

ಡಾ. ಬಾಲಸರಸ್ವತಿ, ಚರ್ಮ ರೋಗ ತಜ್ಞೆ, ಮಂಗಳೂರು

(ಕನ್ನಡಪ್ರಭ, ಜೂನ್ 29, 2015)

ಬಿಳಿ ತೊನ್ನು ಅಥವಾ ವಿಟಿಲಿಗೊ ಚರ್ಮದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯ ಸಮಸ್ಯೆಗಳಲ್ಲೊಂದು. ವಿಶ್ವದಾದ್ಯಂತ ನೂರರಲ್ಲಿ ಒಬ್ಬಿಬ್ಬರಾದರೂ ಬಿಳಿ ತೊನ್ನನ್ನು ಹೊಂದಿರುತ್ತಾರೆ. ಭಾರತೀಯರಲ್ಲಿ ಬಿಳಿ ತೊನ್ನಿನ ಸಮಸ್ಯೆಯು ಇನ್ನೂ ಹೆಚ್ಚು, ಅಂದರೆ ಶೇ. 3-4ರಷ್ಟಿದೆ, ಗುಜರಾತ್ ಮತ್ತು ರಾಜಸ್ತಾನಗಳಲ್ಲಿ ಹತ್ತರಲ್ಲೊಬ್ಬರಿಗಿದೆ. ಬಿಳಿ ತೊನ್ನು ಹೆಚ್ಚಿನವರಲ್ಲಿ (ಶೇ. 55) ಇಪ್ಪತ್ತು ವರ್ಷ ವಯಸ್ಸಿನೊಳಗೇ ತೊಡಗುತ್ತದೆ, ಗ್ರಾಮೀಣವಾಸಿಗಳಿಗಿಂತ ನಗರವಾಸಿಗಳಲ್ಲೇ ಅದು ಹೆಚ್ಚಾಗಿ ಕಂಡುಬರುತ್ತದೆ.

ಬಿಳಿ ತೊನ್ನು ಚರ್ಮಕ್ಕಷ್ಟೇ ಸೀಮಿತವಾದ ಸಮಸ್ಯೆಯಾಗಿದೆ, ದೇಹದ ಇತರ ಅಂಗಗಳಿಗೆ ಅದು ಯಾವ ತೊಂದರೆಯನ್ನೂ ಉಂಟು ಮಾಡುವುದಿಲ್ಲ. ಆದರೆ ಚರ್ಮದ ಬಣ್ಣವು ಅಲ್ಲಲ್ಲಿ ನಶಿಸಿ ಕಲೆಗಳುಂಟಾಗುವುದರಿಂದ ಬಾಹ್ಯರೂಪವು ಬಾಧಿತವಾಗಬಹುದು; ಇದು ತಾತ್ಸಾರಕ್ಕೂ, ಪೂರ್ವಗ್ರಹಗಳಿಗೂ ಕಾರಣವಾಗಿ, ತೊನ್ನಿರುವವರಿಗೆ, ವಿಶೇಷವಾಗಿ ಹೆಣ್ಮಕ್ಕಳಿಗೆ, ಮುಜುಗರವನ್ನೂ, ಮನೋಯಾತನೆಯನ್ನೂ ಉಂಟು ಮಾಡಬಹುದು. ತೊನ್ನಿನ ಬಗೆಗೆ ಜನಸಾಮಾನ್ಯರಲ್ಲಿ ಬಹಳಷ್ಟು ಅಜ್ಞಾನವೂ ಇದೆ; ಅದನ್ನು ಕುಷ್ಠವೆಂದೆಣಿಸಿ ಗೊಂದಲಕ್ಕೀಡಾಗುವವರೂ ಇದ್ದಾರೆ.

ಬಿಳಿ ತೊನ್ನು ದೀರ್ಘ ಕಾಲ ಸಾಗುವ ಸಮಸ್ಯೆಯಾಗಿದ್ದು, ಹಲವು ವಿಧಗಳಲ್ಲಿ ಕಂಡು ಬರುತ್ತದೆ. ಕೆಲವರಲ್ಲಿ ಒಂದೆರಡು ಸಣ್ಣ ಬಿಳಿ ಕಲೆಗಳು ಮೂಡಿದರೆ, ಇನ್ನು ಕೆಲವರಲ್ಲಿ ಬೆರಳ ತುದಿಗಳು ಹಾಗೂ ತುಟಿಗಳಲ್ಲಿ ಅಥವಾ ನಿರ್ದಿಷ್ಟ ಭಾಗಗಳಲ್ಲಿ ಅಥವಾ ಚರ್ಮವಿಡೀ ಬಿಳಿ ತೊನ್ನು ಉಂಟಾಗಬಹುದು. ಸೂರ್ಯ ರಶ್ಮಿಗೆ ಒಡ್ಡಲ್ಪಡುವ ಮುಖ, ಕುತ್ತಿಗೆಯ ಚರ್ಮದಲ್ಲಿ, ಪದೇ ಪದೇ ಹಾನಿಗೀಡಾಗುವ ಕೈಕಾಲುಗಳ ಚರ್ಮದಲ್ಲಿ, ಉಜ್ಜುವಿಕೆಗೆ ಒಳಗಾಗುವ ಸೊಂಟದ ಚರ್ಮದಲ್ಲಿ ತೊನ್ನಿನ ಕಲೆಗಳು ಆರಂಭವಾಗುತ್ತವೆ, ನಂತರ ಚರ್ಮದ ಇತರೆಡೆಗಳಿಗೂ ವ್ಯಾಪಿಸುತ್ತವೆ. ತೊನ್ನು ಎಲ್ಲರಲ್ಲೂ ಒಂದೇ ಸವನೆ ಹೆಚ್ಚುತ್ತಾ ಹೋಗುವುದಿಲ್ಲ; ಅದು ಕೆಲ ಕಾಲ ಸಕ್ರಿಯವಾಗಿದ್ದು, ಇನ್ನೊಂದಷ್ಟು ಸಮಯ ನಿಷ್ಕ್ರಿಯವಾಗಿರಬಹುದು. ತೊನ್ನು ಸಕ್ರಿಯವಾಗಿದ್ದಾಗ ಹೊಸ ಕಲೆಗಳು ಮೂಡುತ್ತವೆ, ನಿಷ್ಕ್ರಿಯವಾಗಿದ್ದಾಗ ಕಲೆಗಳು ಹಾಗೇ ಉಳಿಯುತ್ತವೆ ಅಥವಾ ಕೆಲವೊಮ್ಮೆ ತನ್ನಿಂತಾನಾಗಿ ಮರುಬಣ್ಣ ಪಡೆಯುತ್ತವೆ. ಪರಿಸರ ಮಾಲಿನ್ಯ, ಮನೋಸ್ಥಿತಿ ಹಾಗೂ ಉಪಾಪಚಯದ ಒತ್ತಡಗಳು ದೇಹದಲ್ಲಿ ಜಲಜನಕದ ಪೆರಾಕ್ಸೈಡ್ ಪ್ರಮಾಣವನ್ನೂ, ಉತ್ಕರ್ಷಕ ಒತ್ತಡಗಳನ್ನೂ ಹೆಚ್ಚಿಸಿ, ತೊನ್ನು ಸಕ್ರಿಯವಾಗುವಂತೆ ಪ್ರಚೋದಿಸುತ್ತವೆ.

ಚರ್ಮಕ್ಕೆ ಬಣ್ಣವನ್ನು ನೀಡುವ ಮೆಲನಿನ್ ಅನ್ನು ಉತ್ಪಾದಿಸುವ ಮೆಲನೋಕಣಗಳು ಹಾನಿಗೀಡಾಗುವುದೇ ಬಿಳಿ ತೊನ್ನಿಗೆ ಕಾರಣ. ದೇಹದಲ್ಲಿ ಉಂಟಾಗುವ ಉತ್ಕರ್ಷಕ ಒತ್ತಡಗಳು, ಅವನ್ನು ನಿಭಾಯಿಸುವ ಉತ್ಕರ್ಷಣ ನಿರೋಧಕ ವ್ಯವಸ್ಥೆ ಹಾಗೂ ರೋಗಗಳನ್ನು ತಡೆಯುವ ರಕ್ಷಣಾ ವ್ಯವಸ್ಥೆ – ಇವುಗಳ ನಡುವಿನ ಸಮತೋಲನವು ತಪ್ಪಿದಾಗ ಮೆಲನೋಕಣಗಳು ಹಾನಿಗೀಡಾಗುತ್ತವೆ. ಸೂರ್ಯ ರಶ್ಮಿ, ಪರಿಸರ ಮಾಲಿನ್ಯ, ಆಹಾರ ಇತ್ಯಾದಿಗಳಿಂದ ಉತ್ಕರ್ಷಕ ಒತ್ತಡಗಳು ಹೆಚ್ಚಿದಾಗ, ವ್ಯಕ್ತಿಯ ಉತ್ಕರ್ಷಣ ನಿರೋಧಕ ವ್ಯವಸ್ಥೆಯು ಮೂಲತಃ ದುರ್ಬಲವಾಗಿದ್ದಲ್ಲಿ, ರೋಗ ರಕ್ಷಣಾ ವ್ಯವಸ್ಥೆಯು ದೇಹದ ಕಣಗಳ ವಿರುದ್ಧವೇ ವರ್ತಿಸತೊಡಗುತ್ತದೆ; ಹಾಗಾದಾಗ ಮೆಲನೋಕಣಗಳು ಹಾನಿಗೊಂಡು ಬಿಳಿ ತೊನ್ನು ಉಂಟಾಗುತ್ತದೆ.

ಸಕ್ಕರೆಭರಿತವಾದ ಹಾಗೂ ಸಂಸ್ಕರಿಸಲ್ಪಟ್ಟ ಆಹಾರವಸ್ತುಗಳು ದೇಹದಲ್ಲಿ ಉತ್ಕರ್ಷಕ ಒತ್ತಡಗಳನ್ನು ಹೆಚ್ಚಿಸುತ್ತವೆ. ಇತ್ತೀಚಿನ ವರ್ಷಗಳಲ್ಲಿ, ಅದರಲ್ಲೂ ನಗರವಾಸಿಗಳಲ್ಲಿ, ಬಿಳಿ ತೊನ್ನು ಹೆಚ್ಚುತ್ತಿರುವುದಕ್ಕೆ ಇದುವೇ ಪ್ರಮುಖ ಕಾರಣವಾಗಿರಬಹುದು. ಹೆಚ್ಚುತ್ತಿರುವ ಪರಿಸರ ಮಾಲಿನ್ಯ, ಬದಲಾಗುತ್ತಿರುವ ಜೀವನಶೈಲಿಗಳು ಕೂಡ ಉತ್ಕರ್ಷಕ ಒತ್ತಡಗಳನ್ನು ಹೆಚ್ಚಿಸಿ ತೊನ್ನನ್ನು ಉಂಟು ಮಾಡಬಹುದು. ಕೆಲವರಲ್ಲಿ ರೋಗರಕ್ಷಣಾ ವ್ಯವಸ್ಥೆಯು ಪ್ರತಿಕೂಲವಾಗಿ ವರ್ತಿಸಿ ಮಧುಮೇಹ, ಥೈರಾಯ್ಡ್ ಕಾಯಿಲೆ ಇತ್ಯಾದಿಗಳನ್ನು ಉಂಟು ಮಾಡುತ್ತದೆ; ಅಂಥವರಲ್ಲಿ ಬಿಳಿ ತೊನ್ನು ಉಂಟಾಗುವ ಸಾಧ್ಯತೆಗಳು ಕೂಡ ಹೆಚ್ಚಿರುತ್ತವೆ.

ಬಿಳಿ ತೊನ್ನನ್ನು ತಡೆಯಬೇಕಾದರೆ ಅದನ್ನು ಪ್ರಚೋದಿಸುವ ಹಾನಿಗಳನ್ನು ತಡೆಯಬೇಕಾಗುತ್ತದೆ. ತೊನ್ನಿರುವವರಿಗೆ ಸೂರ್ಯ ರಶ್ಮಿಯು ಎರಡಲಗಿನ ಕತ್ತಿಯಂತೆ ವರ್ತಿಸುತ್ತದೆ. ತೊನ್ನು ಸಕ್ರಿಯವಾಗಿರುವಾಗ ಸೂರ್ಯ ಕಿರಣಗಳಿಗೆ ಮೈಯೊಡ್ಡಿದರೆ ಬಿಳಿ ಕಲೆಗಳು ಇನ್ನಷ್ಟು ಹೆಚ್ಚಬಹುದು, ತೊನ್ನು ನಿಷ್ಕ್ರಿಯವಾಗಿದ್ದಾಗ ಅದು ಮರುಬಣ್ಣ ಬರುವುದಕ್ಕೆ ನೆರವಾಗಬಹುದು. ಆದ್ದರಿಂದ ಸಕ್ರಿಯವಾದ ತೊನ್ನುಳ್ಳವರು ಸೂರ್ಯ ಕಿರಣಗಳಿಂದ ಚರ್ಮವನ್ನು ರಕ್ಷಿಸಿಕೊಳ್ಳಲು ಸನ್ ಸ್ಕ್ರೀನ್ ಗಳನ್ನು ಬಳಸಬೇಕು. ಇದರಿಂದ ಸೂರ್ಯನಿಂದಾಗುವ ಹಾನಿಯು ತಡೆಯಲ್ಪಟ್ಟು ಉತ್ಕರ್ಷಕ ಒತ್ತಡವೂ ಇಳಿಯುತ್ತದೆ.

ಸಕ್ಕರೆ-ಸಿಹಿ ತುಂಬಿದ ಆಹಾರಗಳು, ಸಂಸ್ಕರಿಸಲ್ಪಟ್ಟ ಸಿದ್ಧ ತಿನಿಸುಗಳು ಹಾಗೂ ಕರಿದ ತಿಂಡಿಗಳು ದೇಹದಲ್ಲೂ, ಚರ್ಮದಲ್ಲೂ ಉತ್ಕರ್ಷಕ ಒತ್ತಡವನ್ನು ಹೆಚ್ಚಿಸುವುದರಿಂದ ತೊನ್ನಿರುವವರು ಅವೆಲ್ಲವನ್ನೂ ಸಂಪೂರ್ಣವಾಗಿ ತ್ಯಜಿಸುವುದು ಒಳ್ಳೆಯದು. ಬದಲಿಗೆ ಮೀನು ಹಾಗೂ ತರಕಾರಿಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಸೇವಿಸಬೇಕು.

ಚರ್ಮಕ್ಕೆ ನೇರವಾಗಿ ಹಾನಿಯಾಗುವುದನ್ನೂ ತಡೆಯಬೇಕು; ಬಿಗಿಯಾದ ಉಡುಪುಗಳನ್ನು ಧರಿಸಬಾರದು, ಬಲಶಾಲಿಯಾದ ಸೋಪುಗಳನ್ನು ಬಳಸಬಾರದು ಹಾಗೂ ದೊರಗಾದ ವಸ್ತುಗಳಿಂದ ಚರ್ಮವನ್ನು ತಿಕ್ಕಬಾರದು.

ಚರ್ಮದ ಕಣಗಳ ಮೇಲೆ ರೋಗ ರಕ್ಷಣಾ ವ್ಯವಸ್ಥೆಯ ದಾಳಿಯನ್ನು ತಡೆದು ತೊನ್ನನ್ನು ನಿಷ್ಕ್ರಿಯಗೊಳಿಸುವುದಕ್ಕೆ ಸ್ಟೀರಾಯ್ಡ್ ಮತ್ತಿತರ ಅನೇಕ ಆಧುನಿಕ ಔಷಧಗಳು ಲಭ್ಯವಿವೆ. ಆದರೆ ಉತ್ಕರ್ಷಕ ಒತ್ತಡಗಳನ್ನು ಕಡಿಮೆ ಮಾಡುವ ಕ್ರಮಗಳನ್ನು ಕೈಗೊಳ್ಳದೆ ಕೇವಲ ಈ ಔಷಧಗಳನ್ನಷ್ಟೇ ಸೇವಿಸಿದರೆ, ಅದರ ಪರಿಣಾಮವೂ ತಾತ್ಕಾಲಿಕವಾಗಿರುತ್ತದೆ, ಔಷಧಗಳನ್ನು ಬಿಟ್ಟೊಡನೆ ತೊನ್ನು ಮರುಕಳಿಸುತ್ತದೆ.

ಸೂರ್ಯಕಿರಣಗಳಿಗೆ ಅಥವಾ ಕೃತಕ ದೀಪಗಳ ಅತಿ ನೇರಳೆ ಕಿರಣಗಳಿಗೆ ಚರ್ಮವನ್ನು ಜಾಗ್ರತೆಯಿಂದ ಒಡ್ಡಿ ಮರುಬಣ್ಣ ಬರುವುದನ್ನು ಉತ್ತೇಜಿಸುವುದಕ್ಕೆ ಸಾಧ್ಯವಿದೆ. ಬಣ್ಣಗೆಟ್ಟಿರುವ ಚರ್ಮಕ್ಕೆ ಬಣ್ಣವಿರುವ ಚರ್ಮದ ತುಣುಕುಗಳನ್ನು ಕಸಿ ಮಾಡಿ ಮರುಬಣ್ಣ ಬರುವಂತೆ ಮಾಡಬಹುದು. ಕೃತಕವಾಗಿ ಬೆಳೆಸಿದ ಮೆಲನೋಕಣಗಳನ್ನು ಕಸಿ ಮಾಡುವುದಕ್ಕೂ ಈಗ ಸಾಧ್ಯವಿದೆ.

ತೊನ್ನಿನ ರಹಸ್ಯವನ್ನು ಭೇದಿಸುವುದಕ್ಕೆ ಈಗ ಸತತ ಅಧ್ಯಯನಗಳಾಗುತ್ತಿವೆ. ಆಧುನಿಕ ಜೀವನಶೈಲಿ ಹಾಗೂ ಆಧುನಿಕ ಆಹಾರದ ಪಾತ್ರವು ನಿಚ್ಚಳವಾಗುತ್ತಿದ್ದಂತೆ, ಇವನ್ನು ಬದಲಿಸಿ ತೊನ್ನನ್ನು ತಡೆಯುವ ದಾರಿಗಳೂ ಸ್ಪಷ್ಟವಾಗುತ್ತಿವೆ. ತೊನ್ನಿನ ಕಲೆಗಳಲ್ಲಿ ಮರುಬಣ್ಣ ಮೂಡುವಂತೆ ಪ್ರಚೋದಿಸುವ ಹೊಸ ಹೊಸ ಚಿಕಿತ್ಸೆಗಳೂ ಲಭ್ಯವಾಗುತ್ತಿವೆ. ಇವೆಲ್ಲವೂ ತೊನ್ನಿರುವವರ ಪಾಲಿಗೆ ಆಶಾಕಿರಣಗಳಾಗಿದ್ದು, ಅದಕ್ಕಂಟಿರುವ ಕಳಂಕವನ್ನು ತೊಡೆದು ಹಾಕಲು ನೆರವಾಗಲಿವೆ.

29_06_2015_103_008

Leave a Reply

Your email address will not be published. Required fields are marked *